ನಿಮಗೆ ಅರಿವಿರುವಂತೆ, ಇಯರ್‌ಫೋನ್ ಅಥವಾ ಇಯರ್ ಬಡ್ ಏನೇ ಇದ್ದರೂ ಕಿವಿಯ ಹತ್ತಿರದಲ್ಲೇ ಇದ್ದು ಶಬ್ದವು ಕಿವಿಯ ಒಳಗೆ ಕೇಳಿಸುವಂತೆ ಮಾಡುತ್ತದೆ.
ಮನೆಯಿಂದಾಚೆ ಕಾಲಿಡುತ್ತಿದ್ದಂತೆ ಇಯರ್‌ಫೋನ್ ಕಿವಿಯೇರುತ್ತದೆ. ಬಸ್, ರೈಲು, ಮೆಟ್ರೊ ಪ್ರಯಾಣಿಕರನ್ನು ಗಮನಿಸಿದರೆ ಹತ್ತರಲ್ಲಿ ಎಂಟು ಮಂದಿ ಕಿವಿಗೆ ಇಯರ್‌ಫೋನ್ ಹಾಕಿ ಹಾಡು ಕೇಳುತ್ತಿರುತ್ತಾರೆ. ಕೆಲವರು ಸಿನಿಮಾ ವೀಕ್ಷಣೆ, ವಿಡಿಯೊ ಗೇಮ್‌ನಲ್ಲಿ ಮುಳುಗಿರುತ್ತಾರೆ. ಹದಿ ಹರೆಯದವರಲ್ಲಿ ಇಯರ್‌ಫೋನ್ ಗೀಳು ಹೆಚ್ಚಾಗಿ ಕಂಡುಬರುತ್ತಿದೆ.
ಇಯರ್‌ಫೋನ್ ಹಾಕಿಕೊಂಡು ಮ್ಯೂಸಿಕ್ ಕೇಳಲು, ವಿಡಿಯೋ ನೋಡಲು, ಫೋನ್‌ನಲ್ಲಿ ಮಾತಾಡಲು ಖುಷಿ ಆಗುತ್ತದೆ. ಆದರೆ, ಅದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ.
ನಿಮಗೆ ಅರಿವಿರುವಂತೆ, ಇಯರ್‌ಫೋನ್ ಅಥವಾ ಇಯರ್ ಬಡ್ ಏನೇ ಇದ್ದರೂ ಕಿವಿಯ ಹತ್ತಿರದಲ್ಲೇ ಇದ್ದು ಶಬ್ದವು ಕಿವಿಯ ಒಳಗೆ ಕೇಳಿಸುವಂತೆ ಮಾಡುತ್ತದೆ. ಅತ್ಯಂತ ಹತ್ತಿರದಿಂದ ಶಬ್ದ ಕಿವಿಗೆ ಕೇಳುವುದರಿಂದ ಕಿವಿಗೆ ಗಂಭೀರ ಸಮಸ್ಯೆಗಳಾಗಬಹುದು. ಇದು ಶಾಶ್ವತ ಹಾನಿಗೂ ಕಾರಣವಾಗಬಹುದು.
ದೀರ್ಘಕಾಲಿಕ ಇಯರ್‌ಫೋನ್ ಬಳಕೆಯಿಂದ ಚರ್ಮದ ಅಲರ್ಜಿ, ಫಂಗಲ್ ಇನ್ಫೆಕ್ಷನ್ (ಶಿಲೀಂಧ್ರ ಸೋಂಕು) ಎದುರಾಗಬಹುದು.
ಇತ್ತೀಚೆಗೆ ಇಎನ್‌ಟಿ ಚಿಕಿತ್ಸಾಲಯಗಳಲ್ಲಿ ಬರುತ್ತಿರುವ ಸಾಕಷ್ಟು ಜನರು ಈ ಸಮಸ್ಯೆಗಳಿಂದ ಬಳಲುತ್ತಿರುವುದು ಕಂಡು ಬರುತ್ತಿದೆ.
ಇಯರ್‌ಫೋನ್‌ಗಳಿಂದ ಉಂಟಾಗುವ ಕಾಂಟ್ಯಾಕ್ಟ್ ಡರ್ಮಟೈಟಿಸ್ (ಇಯರ್‌ಫೋನ್‌ಗಳ ರಬ್ಬರ್, ಪ್ಲಾಸ್ಟಿಕ್ ಮತ್ತು ಲೋಹದ ಭಾಗಗಳಿಗೆ ಅಲರ್ಜಿಯ ಪ್ರತಿಕ್ರಿಯೆ) ಪ್ರಕರಣಗಳೂ ಕೂಡ ಹೆಚ್ಚಾಗುತ್ತಿದೆ.
ಇದು ಕಿವಿಯೊಳಗೆ ಮತ್ತು ಸುತ್ತಲೂ ತುರಿಕೆ, ಕೆಂಪು ಅಥವಾ ಸಿಪ್ಪೆ ಸುಲಿಯುವಿಕೆಗೆ ಕಾರಣವಾಗುತ್ತದೆ, ಜೊತೆಗೆ ಕಿವಿಯೊಳಗೆ ಸಿಲುಕಿಕೊಳ್ಳುವ ಬೆವರು ಮತ್ತು ತೇವಾಂಶದಿಂದ ಸೋಂಕುಗಳು ಕಂಡು
ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಎಚ್‌ಒಡಿ ಮತ್ತು ಲೀಡ್ ಕನ್ಸಲ್ಟೆಂಟ್ ಇಎನ್‌ಟಿ ಡಾ. ಜ್ಯೋತಿರ್ಮಯ್ ಎಸ್ ಹೆಗ್ಡೆ ಅವರು ಮಾತನಾಡಿ, ಕಾಂಟ್ಯಾಕ್ಟ್ ಡರ್ಮಟೈಟಿಸ್ ಎನ್ನುವುದು ಇಯರ್‌ಫೋನ್‌ಗಳು ಮತ್ತು ಇಯರ್‌ಬಡ್‌ಗಳಲ್ಲಿರುವ ವಸ್ತುಗಳಿಗೆ ಕಿವಿಗಳು ಪ್ರತಿಕ್ರಿಯಿಸಿದಾಗ ಉಂಟಾಗುವ ಒಂದು ರೀತಿಯ ಚರ್ಮದ ಅಲರ್ಜಿ ಅಥವಾ ಕಿರಿಕಿರಿಯಾಗಿದೆ. ಈ ಸ್ಥಿತಿಯು ಕಿವಿಯ ಒಳಗೆ ಅಥವಾ ಹೊರಗಿನ ಕಿವಿಯ ಸುತ್ತಲೂ ಚರ್ಮದ ಮೇಲೆ ಪರಿಣಾಮ ಬೀರುತ್ತದೆ.
ಒಬ್ಬ ವ್ಯಕ್ತಿ ದೀರ್ಘಕಾಲದವರೆಗೆ ಇಯರ್‌ಫೋನ್‌ಗಳನ್ನು ಧರಿಸಿದಾಗ, ಅವುಗಳಲ್ಲಿರುವ ವಸ್ತುವು ಚರ್ಮದ ಸಮಸ್ಯೆಗಳನ್ನು ಎದುರು ಮಾಡಬಹುದು. ಕೆಲವು ಇಯರ್‌ಫೋನ್‌ಗಳನ್ನು ರಬ್ಬರ್, ಪ್ಲಾಸ್ಟಿಕ್, ಸಿಲಿಕೋನ್ ಅಥವಾ ನಿಕಲ್‌ನಂತಹ ಲೋಹಗಳಿಂದ ತಯಾರಿಸಲಾಗುತ್ತದೆ, ಇದು ಅಲರ್ಜಿ ಸಮಸ್ಯೆಯನ್ನುಂಟು ಮಾಡಬಹುದು. ಈ ವಸ್ತುಗಳು, ದೀರ್ಘಾವಧಿಯ ಬಳಕೆಯಿಂದ ಉಂಟಾಗುವ ಶಾಖ, ಬೆವರಿಗೆ ಚರ್ಮದ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದ್ದಾರೆ.
ಕಿವಿಯ ಸಮಸ್ಯೆ ಹೇಳಿಕೊಂಡು ಬರುವ ಸಾಕಷ್ಟು ಜನರಿಗೆ ತಾವು ಬಳಕೆ ಮಾಡುತ್ತಿರುವ ಇಯರ್‌ಫೋನ್‌ಗಳಿಂದಲೇ ಸಮಸ್ಯೆ ಉಂಟಾಗುತ್ತಿದೆ ಎಂಬುದೇ ತಿಳಿದಿರುವುದಿಲ್ಲ. ಒಣ ಚರ್ಮ ಎಂದು ಭಾವಿಸುತ್ತಾರೆ. ಸಮಸ್ಯೆ ಬಳಿಕವೂ ಇಯರ್‌ಫೋನ್‌ಗಳ ಬಳಕೆ ಮುಂದುವರೆಸುತ್ತಾರೆ. ಅಲ್ಲದೆ, ಸರಿಯಾದ ತಪಾಸಣೆ ಇಲ್ಲದೆ ಕ್ರೀಮ್‌ಗಳನ್ನು ಬಳಸುವುದರಿಂದ ಸೋಂಕುಗಳು ಎದುರಾಗುತ್ತದೆ ಎಂದು ತಿಳಿಸಿದ್ದಾರೆ.
ಫೋರ್ಟಿಸ್ ಆಸ್ಪತ್ರೆಯ ಹಿರಿಯ ಸಲಹೆಗಾರ ಇಎನ್‌ಟಿ, ನೆಕ್ ಮತ್ತು ಸ್ಕಲ್‌ಬೇಸ್ ಸರ್ಜನ್ ಡಾ. ಎಚ್‌ಕೆ ಸುಶೀನ್ ದತ್ ಅವರು ಮಾತನಾಡಿ, ಅತಿಯಾದ ಇಯರ್‌ಫೋನ್ ಬಳಕೆಯಿಂದ ಶಿಲೀಂಧ್ರ ಸೋಂಕು ಎದುರಾಗಬಹುದು. ಇದು ಬ್ಯಾಕ್ಟೀರಿಯಾದಿಂದ ಉಂಟಾಗುವ ಸಾಮಾನ್ಯ ಕಿವಿ ಸೋಂಕಿನಂತೆ ಇರುವುದಿಲ್ಲ. ಶಿಲೀಂಧ್ರಗಳ ಬೆಳವಣಿಗೆಯಿಂದ ಉಂಟಾಗುತ್ತದೆ,
ಇಯರ್‌ಫೋನ್‌ಗಳನ್ನು ನೇರವಾಗಿ ಕಿವಿಗೆ ಸಿಕ್ಕಿಸುವುದರಿಂದ ಅದು ಗಾಳಿಯ ಮಾರ್ಗವನ್ನು ನಿರ್ಬಂಧಿಸುತ್ತದೆ. ಇದು ಕಿವಿಯ ಸೋಂಕನ್ನು ಆಹ್ವಾನಿಸಬಹುದು. ಇಯರ್‌ಫೋನ್‌ಗಳನ್ನು ಬಳಸುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ. ಬ್ಯಾಕ್ಟೀರಿಯಾಗಳು ಇಯರ್‌ಫೋನ್‌ಗಳಲ್ಲಿ ಉಳಿಯುತ್ತದೆ.
ಕೊಳಕಿನಿಂದ ಕೂಡಿದ ಇಯರ್‌ಫೋನ್‌ಗಳನ್ನು ಬಳಸುವುದರಿಂದಲೂ ಈ ಸಮಸ್ಯೆ ಹೆಚ್ಚಾಗುತ್ತದೆ. ದೀರ್ಘಾವಧಿಯವರೆಗೆ ಇಯರ್‌ಫೋನ್‌ಗಳನ್ನು ಬಳಸುವುದರಿಂದ ಕಿವಿಯ ವ್ಯಾಕ್ಸ್‌ನ ಬೆಳವಣಿಗೆಗೆ ಕಾರಣವಾಗುತ್ತದೆ. ಬಳಿಕ ಸಾಕಷ್ಟು ಜನರು ಕಿವಿಗಳಿಗೆ ಇಯರ್ ಬಡ್ ಹಾಗೂ ಇತರೆ ವಸ್ತುಗಳನ್ನು ಹಾಕಿ ಸ್ವಚ್ಛಗೊಳಿಸುತ್ತಾರೆ. ಇದರಿಂದ ಕಿವಿಯ ರಕ್ಷಣಾತ್ಮಕ ಪದರ ಹಾಳಾಗಿ, ಸಮಸ್ಯೆಗಳು ಎದುರಾಗುತ್ತದೆ ಎಂದು ಹೇಳಿದ್ದಾರೆ.
ಸಮಸ್ಯೆಯಿಂದ ದೂರ ಇರುವುದು ಹೇಗೆ?
- ದಿನನಿತ್ಯ ಇಯರ್‌ಫೋನ್ ಬಳಸುವವರು 60/60 ಸೂತ್ರವನ್ನು ಕಡ್ಡಾಯವಾಗಿ ಅನುಸರಿಸಿದರೆ ಅಪಾಯದ ಪ್ರಮಾಣವನ್ನು ಕಡಿಮೆ ಮಾಡಬಹುದು.
- ಸುದೀರ್ಘವಾಗಿ ಇಯರ್‌ಫೋನ್ ಬಳಸುವವರು ಪ್ರತಿ 60 ನಿಮಿಷಕ್ಕೊಮ್ಮೆ ವಿರಾಮ ಕೊಡಲೇ ಬೇಕು. 60 ಡೆಸಿಬಲ್‌ಗಿಂತ ಹೆಚ್ಚಿನ ಮಟ್ಟದ ಶಬ್ದವನ್ನು ಕೇಳಬೇಡಿ. 2 ಗಂಟೆಗಳ ಕಾಲ ನಿರಂತರವಾಗಿ 90 ಡೆಸಿಬಲ್ ಶಬ್ದ ಆಲಿಸಿದರೆ, ಕ್ರಮೇಣ ಶ್ರವಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.
- ಕಿವಿಯೊಳಗಿನ ಮೇಣ, ದೂಳು ಮತ್ತು ಇತರ ಹಾನಿಕಾರಕ ಕಣಗಳನ್ನು ತಡೆಯುತ್ತದೆ. ಕಿವಿಯನ್ನು ಸಂಪೂರ್ಣವಾಗಿ ಶುಚಿ ಮಾಡದಿರಿ. ಇಯರ್ ಬಡ್ ಅಥವಾ ಇತರ ಚೂಪಾದ ವಸ್ತುಗಳಿಂದ ಕಿವಿಯನ್ನು ಸ್ವಚ್ಛಗೊಳಿಸುವುದರಿಂದ ಕಿವಿ ತಮಟೆಗೆ ಹಾನಿಯಾಗುತ್ತದೆ.
- ವರ್ಷಕ್ಕೊಮ್ಮೆ ವೈದ್ಯರಿಂದ ಕಿವಿಗಳನ್ನು ಪರೀಕ್ಷೆ ಮಾಡಿಸಿಕೊಳ್ಳಿ.