
ಕೊಟ್ಟೂರು: ತಾಲ್ಲೂಕು ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವ ನಿಂತು ೧೮ ವರ್ಷಗಳಾಗಿವೆ. ೧೮ ವರ್ಷಗಳ ಹಿಂದೆ ರಾಂಪುರ ಗ್ರಾಮದ ಚಿರಿಬಿ ಗ್ರಾಮಸ್ಥರ ನಡುವೆ ಕಾರಣಾಂತರಗಳಿಂದ ಜಾತ್ರೆ ನಡೆದಿರಲಿಲ್ಲ. ಆ ಕಾರಣಕ್ಕೆ ಪ್ರತೀವರ್ಷ ರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ಹೊಂದಾಣಿಕೆ ಬಾರದ ಕಾರಣಕ್ಕೆ ರದ್ದಾಗುತ್ತಲೇ ಸಾಗಿತ್ತು. ಆದರೆ ಈ ಸಲ ರಥೋತ್ಸವ ನಡೆಸುವಂತಹ ಎಲ್ಲಾ ಲಕ್ಷಣಗಳು ಗೋಚರಿಸಿದ್ದು, ರಥೋತ್ಸವ ಸ್ವಚ್ಛತಾ ಕಾರ್ಯ ಬರದಿಂದ ನಡೆದಿದೆ.
ಭಕ್ತ ಸಾರ್ವಜನಿಕರು ರಥೋತ್ಸವ ನೋಡಲು ಕುತೂಹಲದಿಂದ ಕಾದಿದ್ದಾರೆ. ಈಗ ದೇವಸ್ಥಾನ ಸರ್ಕಾರದ ವಶದಲ್ಲಿರುವುದರಿಂದ ಯಾವುದೇ ಗಲಭೆಗಳು ಆಗದಂತೆ ಕಟ್ಟೆಚ್ಚರದಿಂದ ಯಾವುದೇ ರೀತಿಯ ವಿಘ್ನಗಳು ಬಾರದಂತೆ ರಥೋತ್ಸವ ನಡೆಸಲು ಇಲಾಖೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಾತ್ರೆಯ ಪೂರ್ವಭಾವಿ ಸಭೆ ನಡೆದಿದ್ದು, ಜಾತ್ರೆ ನಡೆಯುವುದು ಬಹುತೇಕ ಖಚಿತವಾಗಿದೆ. ಊರಿನ ಹಿರಿಯ ಮುಸದ್ದಿಗಳಾಗಿರುವ ಗ್ರಾಮಸ್ಥರು ಜಾತ್ರೆ ನಡೆಸಬೇಕೆಂಬ ಮಹದಾಸೆ ಹೊಂದಿದ್ದಾರೆ. ಆಗಸ್ಟ್ ೧೮ ರಂದು ಮೂಗಬಸವೇಶ್ವರ ಸ್ವಾಮಿ ರಥೋತ್ಸವ ನಡೆಸಲು ನಿರ್ಧರಿಸಿದ್ದೇವೆ ಎಂದು ಗ್ರಾಮದ ಪ್ರಕಾಶ್ ತಿಳಿಸಿದ್ದಾರೆ.
ಮೂಗಬಸವೇಶ್ವರ ಜಾತ್ರೆಯಲ್ಲಿ ಈ ಹಿಂದೆ ಕುಸ್ತಿ ಆಟಗಳು ಸೇರಿದಂತೆ ಎಲ್ಲಾ ಗ್ರಾಮೀಣ ಕ್ರೀಡೆಗಳು ನಡೆಯುತ್ತಿದ್ದವು. ಆದರೆ ಈಗ ಅವು ನೆರವೇರುವವೇ ಎಂಬುದನ್ನು ಕಾದು ನೋಡಬೇಕಿದೆ. ಎರಡು ದಶಕಗಳ ಹಿಂದೆ ನಾವು ಸಣ್ಣ ಮಕ್ಕಳಿದ್ದಾಗ ಸೈಕಲ್‌ನಲ್ಲಿ ಜಾತ್ರೆಗೆ ಹೋಗಿ ಜಾತ್ರೆ ನೋಡಿಬಂದದ್ದು ನೆನಪಿದೆ ಎಂದು ಗ್ರಾಮದ ಕೊಟ್ರೇಶ್ ಪತ್ರಿಕೆಗೆ ನೆನಪು ಮಾಡಿಕೊಂಡರು.
ಈ ಜಾತ್ರೆಯ ಸಲುವಾಗಿ ಹಲವಾರು ಸಲ ನ್ಯಾಯಾಲಯಕ್ಕೆ ಹೋಗಿರುವುದನ್ನು ನೆನಪು ಮಾಡಿಕೊಳ್ಳಬಹುದು. ಎರಡು ಊರಿನ ಗ್ರಾಮಸ್ಥರು ಮನಸ್ತಾಪಗಳನ್ನು ಮರೆತು ಜಾತ್ರೆ ನಡೆಯಲು ಪ್ರೋತ್ಸಾಹ ನೀಡಬೇಕೆಂದು ಪ್ರಜ್ಞಾವಂತ ನಾಗರಿಕರು ಕರಿಬಸವರಾಜ್, ಪ್ರವೀಣ್, ಕೊಟ್ರು ಬಸಯ್ಯ, ಪತ್ರಿಕೆಗೆ ತಿಳಿಸಿದ್ದಾರೆ