
ಮಾನ್ವಿಃ- ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಪದವಿ ಕೇವಲ ಸರ್ಕಾರಿ ನೌಕರಿ ಪಡೆಯಲು ಮಾತ್ರ ಎನ್ನುವ ಭಾವನೆ ಜನರಲ್ಲಿ ಹೆಚ್ಚಾಗುತ್ತಿದೆ. ಆದರೆ ಹೆಚ್ಚು ಸಂಬಳ ಬರುವ ಸರ್ಕಾರಿ ನೌಕರಿಗಿಂತ ಕೃಷಿ ಕೆಲಸದಲ್ಲಿ ತೊಡಗುವುದು ಉತ್ತಮ. ಎಂದು ನೇತಾಜಿ ಪಿ.ಯು. ಕಾಲೇಜಿನ ಪ್ರಾಚಾರ್ಯೆ ಕೆ.ವಿಜಯಲಕ್ಷಿö್ಮ ಹೇಳಿದರು.
ಅವರು ಇಂದು ಪ್ರತ್ಯಕ್ಷ ಪಾಠ ಬೋಧನೆ ಅಡಿಯಲ್ಲಿ ನೇತಾಜಿ ಪದವಿಪುರ್ವ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಗುಡದಿನ್ನಿ ಗ್ರಾಮದ ಹೊಲ ಗದ್ದೆಗಳ ವೀಕ್ಷಣೆಗೆ ಕರೆದೊಯ್ಯಲಾಗಿತ್ತು. ಆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕೃಷಿ ಅಂದ ತಕ್ಷಣ ಬರಿ ಉತ್ತುವುದು, ಬಿತ್ತುವುದು, ಅಷ್ಟೆ ಅಲ್ಲ, ಅಲ್ಲಿ ದನಕರುಗಳ ಸಾಗಾಣಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ , ಕೂಡಿ ಬಾಳುವುದು ಎಲ್ಲವನ್ನೂ ಒಳಗೊಂಡ ಒಂದು ಬದುಕಿನ ವಿಧಾನ. ಇಲ್ಲಿ ಖುಷಿ ಇದೆ, ನೆಮ್ಮದಿ ಇದೆ. ಇಂತಹ ರೈತನ ಜೀವನದ ದಾರಿಯಲ್ಲಿ ನಾವೆಲ್ಲಾ ಸಾಗೋಣ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ನೇತಾಜಿ ಕಾಲೇಜಿನ 160 ವಿದ್ಯಾರ್ಥಿಗಳು ಮತ್ತು ಎಲ್ಲಾ ಉಪನ್ಯಾಸಕರು ಹತ್ತಿ ಹೊಲದಲ್ಲಿ ಕಳೆ ತೆಗೆದರು. ನಂತರ ಗದ್ದೆಗೆ ಇಳಿದು ಭತ್ತ ನಾಟಿಯನ್ನು ಪರಿಚಯ ಮಾಡಿಕೊಂಡರು. ಹೊಲದ ಒಡೆಯ ಅಮರೇಶ ನಾಯಕ ಗುಡದಿನ್ನಿ ಅವರು ಒಕ್ಕಲುತನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸಂಸ್ಥೆಯ ಅಧ್ಯಕ್ಷ ಕೆ..ಈ.ನರಸಿಂಹ, ಸಹಕಾರ್ಯದರ್ಶಿ ಕೆ.ರವಿವರ್ಮಾ, ಉಪನ್ಯಾಸಕರಾದ ಆರೀಫ್ , ಚಂದ್ರುಜಾಧವ್, ರಮೇಶ್, ನಾಗರಾಜ್, ವೀರನಗೌಡ, ಸದ್ದಾಂಹುಸೇನ್, ಕಾವ್ಯ, ಸೇರಿದಂತೆ ಇತರರು ಭಾಗವಹಿಸಿದ್ದರು.